
ಬೇಲೂರು: ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಅಕ್ರಮ ಮದ್ಯ ಮತ್ತು ಸಂಬಂಧಿತ ವಸ್ತುಗಳನ್ನು ಶುಕ್ರವಾರ ಕಚೇರಿ ಆವರಣದಲ್ಲಿ ನಾಶಪಡಿಸಲಾಯಿತು.
ಹಾಸನ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಚ್. ರಘು ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಬೇಲೂರು ಅಬಕಾರಿ ವಲಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ 12 ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ 41.85 ಲೀಟರ್ ಅಕ್ರಮ ಮದ್ಯ, 31.5 ಲೀಟರ್ ಕಳ್ಳಬಟ್ಟಿ ಸಾರಾಯಿ, 87 ಲೀಟರ್ ಬೆಲ್ಲದ ಕೊಳೆ, 30.5 ಲೀಟರ್ ಸೇಂದಿ ಸೇರಿದಂತೆ ಹಲವು ವಸ್ತುಗಳನ್ನು ನಾಶಪಡಿಸಲಾಯಿತು. ಇದಲ್ಲದೆ ಪ್ಲಾಸ್ಟಿಕ್ ಕೊಡಗಳು, ಕ್ಯಾನ್‌ಗಳು, ಬಾಟಲ್‌ಗಳು, ಮಣ್ಣಿನ ಮಡಿಕೆಗಳು, ಅಲ್ಯೂಮಿನಿಯಂ ಪಾತ್ರೆಗಳು ಹಾಗೂ ಕಬ್ಬಿಣ ಕುಡಗೋಲು ಸೇರಿದಂತೆ ಮದ್ಯ ತಯಾರಿಕೆ ಮತ್ತು ಸಂಗ್ರಹಕ್ಕೆ ಬಳಸಲಾಗುತ್ತಿದ್ದ ಸಾಮಗ್ರಿಗಳನ್ನು ಧ್ವಂಸ ಮಾಡಲಾಗಿದೆ.
ಹಿರಿಯ ಅಧಿಕಾರಿಗಳ ಆದೇಶದಂತೆ ತಾಲೂಕು ಆಡಳಿತಾಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿ ಸಮ್ಮುಖದಲ್ಲಿ ನಾಶಪಡಿಸುವ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬೇಲೂರು ವಲಯದ ಅಬಕಾರಿ ನಿರೀಕ್ಷಕಿ ಅಪೂರ್ವ ಎ.ಆರ್, ಅಕ್ರಮ ಮದ್ಯ ಮಾರಾಟ, ಕಳ್ಳಬಟ್ಟಿ ಮತ್ತು ಸೇಂದಿ ತಯಾರಿಕೆ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು. ಸಾರ್ವಜನಿಕರು ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರೆ ತಕ್ಷಣ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗುವುದು ಎಂದರು.
ಕಾರ್ಯಾಚರಣೆಯಲ್ಲಿ ಅಬಕಾರಿ ಪಿಎಸ್ಐ ಸತೀಶ್, ಸಿಬ್ಬಂದಿ ಮಲ್ಲಿಕಾರ್ಜುನ್ ಸೇರಿದಂತೆ ಇತರರು ಭಾಗವಹಿಸಿದ್ದರು.


Leave a Reply