Advertisement

ಹಾಸನದಲ್ಲಿ ಸೈಟ್ ಮಾಲೀಕತ್ವ ಜಟಾಪಟಿ: ಯಶ್ ತಾಯಿ ಪುಷ್ಪಾಗೆ ಕೋರ್ಟ್‌ನ ಮೊದಲ ಹಂತದ ಗೆಲುವು

ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಖರೀದಿಸಿದ್ದ ಸೈಟ್‌ಗೆ ಸಂಬಂಧಿಸಿದ ಮಾಲೀಕತ್ವ ವಿವಾದ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಹಾಸನ ನಗರದ 4ನೇ ಜೆಎಂಎಫ್‌ಸಿ ಕೋರ್ಟ್ ಫೆಬ್ರವರಿ 11ರಂದು ನೀಡಿದ ಆದೇಶದಲ್ಲಿ, ಹಿಂದಿನ ಏಕಪಕ್ಷೀಯ ತೀರ್ಪಿನ ಜಾರಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.

ಏನಿದು ಪ್ರಕರಣ?

ಲಕ್ಷ್ಮಮ್ಮ ಎಂಬವರು ವಿವಾದಿತ ಸೈಟ್ ತಮ್ಮದೇ ಎಂಬುದಾಗಿ ಹೇಳಿಕೊಂಡಿದ್ದು, ಅವರ ಜಿಪಿಎ ಹೋಲ್ಡರ್ ಮೂಲಕ ದಾವೆ ಹೂಡಲಾಗಿತ್ತು. ಈ ಪ್ರಕರಣದಲ್ಲಿ ಏಪ್ರಿಲ್ 16, 2025ರಂದು ಏಕಪಕ್ಷೀಯ (Ex-parte) ತೀರ್ಪು ಹೊರಬಿದ್ದಿತ್ತು. ಆದರೆ ತಮ್ಮನ್ನು ಕಕ್ಷಿದಾರರಾಗಿ ಪರಿಗಣಿಸದೆ ಆದೇಶ ನೀಡಲಾಗಿದೆ ಎಂದು ಹೇಳಿಕೊಂಡು ಯಶ್ ಅವರ ತಾಯಿ ಪುಷ್ಪಾ ಕೋರ್ಟ್ ಮೆಟ್ಟಿಲೇರಿದ್ದರು.

ಮೇಲ್ಮನವಿ ಮತ್ತು ಮಧ್ಯಂತರ ಅರ್ಜಿ

ಕೋರ್ಟ್ ಆದೇಶ ಹೊರಬಿದ್ದ ನಂತರ 90 ದಿನಗಳೊಳಗೆ ಮೇಲ್ಮನವಿ ಸಲ್ಲಿಸದಿರುವ ಹಿನ್ನೆಲೆಯಲ್ಲಿ, ವಿಳಂಬ ಕ್ಷಮಿಸಬೇಕೆಂದು ಮಧ್ಯಂತರ ಅರ್ಜಿ ಕೂಡ ಸಲ್ಲಿಸಲಾಗಿತ್ತು. ಕೋರ್ಟ್ ವಿಳಂಬ ಅರ್ಜಿಯನ್ನು ಮಾನ್ಯಗೊಳಿಸಿ, ಪುಷ್ಪಾಗೆ ಪ್ರಕರಣದಲ್ಲಿ ಕಕ್ಷಿದಾರರಾಗಿ ಹಾಜರಾಗಲು ಅವಕಾಶ ನೀಡಿದೆ.

ಕೋರ್ಟ್‌ನ ಮಹತ್ವದ ಆದೇಶ

* ಓಎಸ್ ನಂ. 672/2023ರ ಆದೇಶ ಜಾರಿ ಅಥವಾ ಅನುಷ್ಠಾನಕ್ಕೆ ತಾತ್ಕಾಲಿಕ ಸ್ಟೇ.
* ಪ್ರಕರಣ ಇತ್ಯರ್ಥವಾಗುವವರೆಗೂ ವಿವಾದಿತ ಸೆಡ್ಯೂಲ್ ಪ್ರಾಪರ್ಟಿಯನ್ನು ಪರವಾನಗಿ/ಹಸ್ತಾಂತರ ಮಾಡದಂತೆ ನಿರ್ಬಂಧ.
* ಮೂಲ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂಬ ಸೂಚನೆ.
* ಮಿಸಲೇನಿಯಸ್ ಅರ್ಜಿ ಸಂಖ್ಯೆ 25/2025ರ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಲಾಗಿದೆ.

ಮುಂದಿನ ವಿಚಾರಣೆ

ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಲಾಗಿದೆ. ಈ ನಡುವೆ ಸೈಟ್ ಸಂಬಂಧಿಸಿದ ಯಾವುದೇ ವ್ಯವಹಾರ ಅಥವಾ ಬದಲಾವಣೆ ಮಾಡಲು ಅವಕಾಶವಿಲ್ಲ.

ಈ ಪ್ರಕರಣವು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾನೂನು ತಿರುವುಗಳನ್ನು ಕಾಣುವ ಸಾಧ್ಯತೆ ಇದ್ದು, ಹಾಸನದಲ್ಲಿ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *