Advertisement

ಕೃಷಿ ಸಾಲದ ಒತ್ತಡಕ್ಕೆ ರೈತ ಆತ್ಮಹತ್ಯೆ

ಬೇಲೂರು: ಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬೇಲೂರು ತಾಲೂಕಿನ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೃತ ರೈತನನ್ನು ಬೇಲೂರು ತಾಲೂಕಿನ ಹಳೇಬೀಡು ಸಮೀಪದ ಗೋಣಿ ಸೋಮೇನಹಳ್ಳಿ ಗ್ರಾಮದ ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ಅವರು ಕಳೆದ ಹತ್ತು ವರ್ಷಗಳಿಂದ ಕೆನರಾ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿ ಕೃಷಿಗಾಗಿ ಸಾಲ ಮಾಡಿಕೊಂಡಿದ್ದರು. ಆದರೆ ಅತಿವೃಷ್ಟಿ–ಅನಾವೃಷ್ಟಿ, ಬೆಳೆ ನಷ್ಟ ಹಾಗೂ ಸರಿಯಾದ ಬೆಂಬಲ ಬೆಲೆ ಸಿಗದ ಕಾರಣ ಕೃಷಿಯಲ್ಲಿ ಭಾರಿ ನಷ್ಟ ಅನುಭವಿಸಿದ್ದರು.ಬ್ಯಾಂಕ್ ಮತ್ತು ಕೈ ಸಾಲ ಸೇರಿಸಿ ಸುಮಾರು 20 ಲಕ್ಷ ರೂ.ವರೆಗೆ ಸಾಲವಿತ್ತು ಎನ್ನಲಾಗಿದೆ. ಇತ್ತೀಚೆಗೆ ಕೆನರಾ ಬ್ಯಾಂಕ್ ಸಿಬ್ಬಂದಿಗಳು ಮನೆ ಜಪ್ತಿ ಮಾಡಲು ಬಂದ ಹಿನ್ನೆಲೆ ತಮ್ಮ ಜಮೀನನ್ನು ಮಾರಾಟ ಮಾಡಿ ಬಡ್ಡಿರಹಿತ ಸಾಲವನ್ನು ಪಾವತಿಸಿದ್ದರು. ಆದರೆ ಕೈ ಸಾಲ ಹಾಗೂ ಇನ್ನೊಂದು ಬ್ಯಾಂಕ್‌ನ ಸಾಲ ಉಳಿದಿದ್ದರಿಂದ ಮುಂದಿನ ದಿನಗಳಲ್ಲಿ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ ಎಂಬ ಮನಸ್ಥಿತಿಗೆ ಒಳಗಾಗಿದ್ದರು ಎನ್ನಲಾಗಿದೆ.ಇದರಿಂದ ಮನನೊಂದು ಇಂದು ಬೆಳಿಗ್ಗೆ ತಮ್ಮ ಜಮೀನಿನ ಪಕ್ಕದಲ್ಲಿರುವ ದಿನೇಶ್ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ತೇಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನಾ ಸ್ಥಳಕ್ಕೆ ಹಳೇಬೀಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮೃತ ರಮೇಶ್ ಅವರು ಅಪ್ಪಟ ಬಿಜೆಪಿ ಕಾರ್ಯಕರ್ತರಾಗಿದ್ದು, ಹಳೇಬೀಡು ಭಾಗದಲ್ಲಿ ಸಕ್ರಿಯವಾಗಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದರು. ಘಟನೆ ತಿಳಿದ ಬಳಿಕ ಸ್ಥಳಕ್ಕೆ ಶಾಸಕ ಸುರೇಶ್ ಅವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

Leave a Reply

Your email address will not be published. Required fields are marked *