Advertisement

ಆಲೂರು : ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ” 3 ನೇ ವರ್ಷದ ಭೀಮ ಕೋರೆಗಾಂವ್ ವಿಜಯೋತ್ಸವ ಸಂಭ್ರಮ ” ಆಚರಣೆ ಕಾರ್ಯಕ್ರಮ ತಾಲೂಕು ಕೋರೆಂಗಾವ್ ವಿಜಯೋತ್ಸವ ಸಮಿತಿ ಮತ್ತು ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಜ 07 ರ ಬುಧವಾರ ಆಯೋಜಿಸಲಾಗಿದೆ ಎಂದು ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಬಸವರಾಜು ಗೇಕರವಳ್ಳಿ ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದವರು, ತಾಲ್ಲೂಕಿನಲ್ಲಿ 3 ನೇ ವರ್ಷದ ಭೀಮ ಕೋರೆಗಾಂವ್ ವಿಜಯೋತ್ಸವಸಂಭ್ರಮಾಚರಣೆಯನ್ನು ಜ 7 ರ ಬುಧವಾರ ಬೆಳಗ್ಗೆ 10 ಗಂಟೆಗೆ ವೀರಶೈವ ಕಲ್ಯಾಣ ಮಂಟಪದಿಂದ ಹೊರಟು ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ  ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ವಾದ್ಯಗೋಷ್ಠಿ, ಡಿ ಜೆ, ಕೀಲು ಕುದುರೆ, ಡೊಳ್ಳುಕುಣಿತ ಕಲಾ ತಂಡಗಳು ಭಾಗವಹಿಸುವವು. ನಂತರ ತಾಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ತಾಲೂಕು ಕಚೇರಿ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಶಾಸಕ ಸಿಮೆಂಟ್ ಮಂಜುನಾಥ್ ಉದ್ಘಾಟಿಸುವರು. ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ,  ಬುದ್ಧ ಮತ್ತು ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವರು. ರಾಜ್ಯ ಪ್ರಜಾ ಪರಿವರ್ತನ ವೇದಿಕೆ ಅಧ್ಯಕ್ಷ ಬಿ ಗೋಪಾಲ್ ಮುಖ್ಯ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಿ ಮಲ್ಲೇಶ್, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಸೇರಿದಂತೆ ಇತರ ದಲಿತ ನಾಯಕರು ಪಾಲ್ಗೊಳ್ಳಲ್ಲಿದ್ದಾರೆ ಎಂದ ಅವರು ತಾಲೂಕಿನ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದರು.

ದಲಿತ ಮುಖಂಡ ಅಜ್ಜೇನಹಳ್ಳಿ ಲೋಕೇಶ್ ಮಾತನಾಡಿ, ಶಿಕ್ಷಣ ಹಾಗೂ ಸಮಾನತೆಯಿಂದ ವಂಚಿತರಾಗಿದ್ದ ದಲಿತ ಸಮುದಾಯ ಬ್ರಿಟಿಷರು ಹಾಗೂ ಪೇಶ್ವೆಗಳ ವಿರುದ್ಧ 1818 ರಲ್ಲಿ ಹೋರಾಟ ನಡೆಸಿ, ಯುದ್ಧದಲ್ಲಿ ಗೆದ್ದ ಸೈನಿಕರ ಪರಾಕ್ರಮವನ್ನು ಶಾಶ್ವತವಾಗಿ ನೆನಪಿನಲ್ಲಿ ಇರಿಸಲು ಸುಮಾರು 75 ಅಡಿ ಎತ್ತರದ ” ವಿಜಯ ಸ್ತಂಭ ” ವನ್ನು ಹಾಗೂ ಯುದ್ಧದಲ್ಲಿ ಮಡಿದ 22 ಸೈನಿಕರ ಹೆಸರುಗಳನ್ನು ಭೀಮಾ ನದಿಯ ದಡದಲ್ಲಿರುವ ಕೋರೆಗಾಂವ್ ಎಂಬ ಗ್ರಾಮದಲ್ಲಿ ಸ್ಥಾಪಿಸಲಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿ ವರ್ಷ ಜನವರಿ 1 ರಂದು ಸ್ಥಳಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುತ್ತಿದ್ದರು. ನಮಗೆ ಶಿಕ್ಷಣ ಹಾಗೂ ಸಮಾನತೆ ದೊರಕಲು ಕಾರಣವಾದ ಈ ಐತಿಹಾಸಿಕ ಯುದ್ಧದ ಉದ್ದೇಶವನ್ನು ಇಂದಿನ ಪೀಳಿಗೆಗೆ ತಿಳಿಸಲು ವಿಜಯೋತ್ಸವವನ್ನು ಪ್ರತಿ ವರ್ಷ ಆಚರಿಸುತ್ತಿರುವುದಾಗಿ ತಿಳಿಸಿದ ಅವರು ತಾಲೂಕಿನ ಸಮುದಾಯದ ಜನತೆ ಭಾಗವಹಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಬಸವರಾಜು ಗೇಕರವಳ್ಳಿ, ಹಿರಿಯ ದಲಿತ ಮುಖಂಡರಾದ ರಂಗಯ್ಯ ಅಜ್ಜೇನಹಳ್ಳಿ, ಲೋಕೇಶ್ ಅಜ್ಜೇನಹಳ್ಳಿ, ಬೈರೇಶ್ ಗೇಕರವಳ್ಳಿ, ಧರ್ಮ ಯಡೂರು, ಹರೀಶ್ ಭರತವಳ್ಳಿ ಇದ್ದರು.

Leave a Reply

Your email address will not be published. Required fields are marked *