ಶ್ರೀ ಚನ್ನಕೇಶವ ದೇಗುಲದ ಮುಂಭಾಗದಲ್ಲಿ ನೋ ಪಾರ್ಕಿಂಗ್ ನಾಮಫಲಕ ಅಳವಡಿಸಲಾಗಿದ್ದರೂ ಸಹ ಕೆಲ ಸ್ಥಳೀಯರು ಹಾಗೂ ಪ್ರವಾಸಿಗರು ದೇಗುಲದ ಮುಂಭಾಗದಲ್ಲೇ ವಾಹನಗಳನ್ನು ನಿಲ್ಲಿಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸ್ಥಳದಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಯಿತು.
ನಿಯಮ ಉಲ್ಲಂಘಿಸಿ ವಾಹನಗಳನ್ನು ನಿಲ್ಲಿಸಿದ್ದ ವಾಹನಗಳ ಟೈರ್‌ಗಳಿಗೆ ಇಂಟರ್ ಲಾಕ್ ಹಾಕಿ, ವಾಹನ ಚಾಲಕರಿಗೆ ರೂ. 500 ದಂಡ ವಿಧಿಸಿ ರಶೀದಿ ವಿತರಿಸಲಾಯಿತು.
ಈ ಕ್ರಮದಿಂದ ದೇಗುಲದ ಮುಂಭಾಗ ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಹಾಗೂ ಭಕ್ತರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ಮುಂದಿನ ದಿನಗಳಲ್ಲಿ ನೋ ಪಾರ್ಕಿಂಗ್ ನಿಯಮ ಉಲ್ಲಂಘನೆ ಮುಂದುವರಿದರೆ ಇನ್ನೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಂಡಾಧಿಕಾರಿ ಶ್ರೀಧರ್ ಕಂಕನವಾಡಿ ಹಾಗು ಪೊಲೀಸ್ ವೃತ್ತ ನಿರೀಕ್ಷಕ ರೇವಣ್ಣ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ವೃತ್ತ ನಿರೀಕ್ಷಕ ರೇವಣ್ಣ, ಶ್ರೀ ಚನ್ನಕೇಶವ ದೇಗುಲದ ಮುಂಭಾಗ ಅಕ್ರಮವಾಗಿ ವಾಹನ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೆಲ ವಾಹನ ಚಾಲಕರು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿ ಸ್ಥಳೀಯರು ಹಾಗೂ ಭಕ್ತರು ಓಡಾಡಲು ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು. ಈ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ದೇಗುಲ ವೀಕ್ಷಣೆಗೆ ಬರುವ ವಾಹನಗಳನ್ನು ದೇಗುಲದ ಹಿಂಭಾಗದಲ್ಲಿ ನಿಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಆ ಸೂಚನೆಗಳಿಗೆ ಕಿಮ್ಮತ್ತು ನೀಡದೆ ಮತ್ತೆ ಮತ್ತೆ ನಿಯಮ ಉಲ್ಲಂಘನೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಸ್ಥಳದಲ್ಲೇ ಕ್ರಮ ಕೈಗೊಳ್ಳಲಾಗಿದೆ .
ಇನ್ನು ಮುಂದೆ ಸ್ಥಳೀಯರಾಗಿರಲಿ ಅಥವಾ ಪ್ರವಾಸಿಗರಾಗಿರಲಿ, ಯಾರೇ ಆಗಿದ್ದರೂ ದೇಗುಲದ ಮುಂಭಾಗದಲ್ಲಿ ವಾಹನ ನಿಲ್ಲಿಸಿದರೆ ಅವರ ವಾಹನಗಳ ಚಕ್ರಗಳಿಗೆ ಇಂಟರ್ ಲಾಕ್ ಹಾಕಿ ಬೀಗ ಹಾಕಲಾಗುವುದು. ನಿಯಮ ಉಲ್ಲಂಘನೆ ಮುಂದುವರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾನೂನು ಎಲ್ಲರಿಗೂ ಒಂದೇ ಎಂದು ವೃತ್ತ ನಿರೀಕ್ಷಕ ರೇವಣ್ಣ ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ತಹಶಿಲ್ದಾರ್ ಶ್ರೀಧರ್ ಕಂಕನವಾಡಿ, ಚನ್ನಕೇಶವ ದೇಗುಲ ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿದ್ದು, ಇಲ್ಲಿ ಶಿಸ್ತು ಮತ್ತು ಸಂಚಾರ ವ್ಯವಸ್ಥೆ ಕಾಪಾಡುವುದು ಅತ್ಯಂತ ಅಗತ್ಯವಾಗಿದೆ. ದೇಗುಲದ ಮುಂಭಾಗ ವಾಹನ ರಹಿತ ವಲಯವಾಗಿದ್ದು, ಎಲ್ಲರೂ ನಿಯಮಗಳನ್ನು ಪಾಲಿಸಬೇಕು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಅಧಿಕಾರಿಗಳು ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಾರ್ವಜನಿಕರು ಸಹಕರಿಸಿದರೆ ಮಾತ್ರ ಸುಗಮ ಸಂಚಾರ ಮತ್ತು ಭಕ್ತರಿಗೆ ಅನುಕೂಲವಾಗುತ್ತದೆ.ಇಲ್ಲದಿದ್ದರೆ ಕಾನೂನಿನ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ದೇಗುಲ ಕಾರ್ಯನಿರ್ವಾಹಕಾಧಿಕಾರಿ ಯೋಗೇಶ್,ಪೊಲೀಸ್ ಹಾಗು ದೇಗುಲ ಸಿಬ್ಬಂದಿಗಳು ಹಾಜರಿದ್ದರು.
ಪೊಲೀಸ್ ಇಲಾಖೆ ತಾಲೂಕು ಆಡಳಿತ ಇಲಾಖೆ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.


Leave a Reply